Book Description
ಉತ್ತರ ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯವೃದ್ಧಿಯ ಓರ್ವ ರೂವಾರಿಯಾಗಿ, ತಮ್ಮ ಅಸಾಧಾರಣ ಪ್ರತಿಭೆಯಿಂದ ಅಖಿಲ ಭಾರತ ಸ್ತರದ ಅಗ್ರಶ್ರೇಣಿಯ ಸಾಮಾಜಿಕ ನಾಯಕರಾಗಿ, 1951ರಿಂದ ನಾಲ್ಕು ದಶಕಗಳ ಅವಧಿಯ ಭಾರತದ ರಾಜಕೀಯ ಇತಿಹಾಸದ ಮೇಲೆ ಅಚ್ಚಳಿಯದ ಛಾಪನ್ನು ಮೂಡಿಸಿದವರು, ‘ಕರ್ನಾಟಕ ಕೇಸರಿ’ ಜಗನ್ನಾಥರಾವ ಜೋಶಿ (1920-1991). ಭಾರತೀಯ ಜನಸಂಘದ ಮತ್ತು ತದನಂತರ ಭಾರತೀಯ ಜನತಾ ಪಕ್ಷದ ಅಗ್ರಣಿಗಳಾಗಿದ್ದವರು ಅವರು; ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್ – ನಾಲ್ಕೂ ಭಾಷೆಗಳಲ್ಲಿ ಆ ಪೀಳಿಗೆಯ ಅತ್ಯಂತ ಪ್ರಭಾವಿ ಭಾಷಣಕಾರರೆಂದು ವಿಶ್ರುತರಾಗಿದ್ದವರು; ಅಸಾಮಾನ್ಯ ಸಂಘಟಕರು, ಹೋರಾಟಗಾರರು. 1948ರ ರಾಷ್ಟ್ರೀಯ ಸ್ವಯಂಸೇವಕ ಸಂಘ ನಿಷೇಧ ವಿರೋಧಿ ಸತ್ಯಾಗ್ರಹ, 1955ರ ಗೋವಾ ವಿಮೋಚನ ಸತ್ಯಾಗ್ರಹ, 1965-66ರ ಕಛ್ ಸತ್ಯಾಗ್ರಹ, 1972ರ ‘ಸಿಮ್ಲಾ ಒಪ್ಪಂದ ವಿರೋಧಿ ಸಂಘರ್ಷ, 1975-76ರ ತುರ್ತು ಪರಿಸ್ಥಿತಿ ವಿರೋಧಿ ಸಂಘರ್ಷ ಮೊದಲಾದ ವಿವಿಧ ಆಂದೋಲನಗಳ ಮುಂಚೂಣಿಯಲ್ಲಿದ್ದು ಹಲವು ಬಾರಿ ಕಾರಾಗೃಹವಾಸಕ್ಕೊಳಗಾದವರು. 1967ರಿಂದ ಮೂರು ಅವಧಿಗಳಲ್ಲಿ ಸಂಸತ್ಸದಸ್ಯರಾಗಿದ್ದು ಸತತವಾಗಿ ಜನಪರ ನಿಲವುಗಳನ್ನು ಪ್ರಖರವಾಗಿ ಪ್ರತಿಪಾದಿಸಿದವರು ಅವರು. ಅಸ್ಖಲಿತ ಹಿಂದುತ್ವನಿಷ್ಠೆ ಅವರಲ್ಲಿ ರಕ್ತಗತ. ನಾಟಕ, ಚಲನಚಿತ್ರ, ಸಾಹಿತ್ಯದಿಂದ ಅಧ್ಯಾತ್ಮದವರೆಗೆ ಅವರು ಆಸಕ್ತಿ ತಳೆಯದ ಕ್ಷೇತ್ರವಿಲ್ಲ. ನಿರಂತರ ಅಧ್ಯಯನಶೀಲತೆ, ದೃಷ್ಟಿವೈಶಾಲ್ಯ, ಅನುಪಮ ಮಾನವೀಯ ಗುಣಗಳಿಂದಾಗಿ ದೇಶದೆಲ್ಲೆಡೆ ವಿಶಾಲ ಜನಾದರಣೆ ಗಳಿಸಿಕೊಂಡಿದ್ದ ಚರಿತ್ರಾರ್ಹ, ಜಗನ್ನಾಥರಾವ ಜೋಶಿ. ಅವರ ಜೀವನ ಕಥನ, ರೋಚಕ ಸಂಸ್ಮರಣೆಗಳು, ವಿನೋದ ಪ್ರಸಂಗಗಳು ಹಾಗೂ ಭಾಷಣಗಳನ್ನು ಈ ಪುಸ್ತಕಗಳಲ್ಲಿ ಕಾಣಬಹುದು.
Reviews
There are no reviews yet.